ರಸಲ್, ಜಾರ್ಜ್ ವಿಲಿಯಮ್
1867-1935. ಐರ್ಲೆಂಡಿನ ಕವಿ. ನಾಟಕಕಾರ ಮತ್ತು ವರ್ಣಚಿತ್ರಕಾರ. 1867 ಏಪ್ರಿಲ್ 10 ರಂದು ಲೂರ್‍ಗಾನ್ ಕೋ ಅರ್‍ಮಗ್‍ನಲ್ಲಿ ಹುಟ್ಟಿದ. ಇವನು ತನ್ನ ಕಾವ್ಯವನ್ನು ಏಈ ಎಂಬ ಕಾವ್ಯ ನಾಮದಲ್ಲಿ ಬರೆದಿದ್ದಾನೆ. ಡಬ್ಲಿನ್‍ನಲ್ಲಿ ನೆಲೆಸಿ ರಥಮೈನ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನಂತರ ಈತ ಕಚೇರಿಯೊಂದರಲ್ಲಿ ಸ್ವಲ್ಪಕಾಲ ಕರಣಿಕನಾಗಿ ಕೆಲಸ ಮಾಡಿದ. 1897ರಲ್ಲಿ ಐರಿಷ್ ಅಗ್ರಿಕಲ್ಚರಲ್ ಆರ್‍ಗನೈಸೇಷನ್ ಸೊಸೈಟಿಯನ್ನು ಸೇರಿ ಅಂತಹ ಹಲವು ಸಂಸ್ಥೆಗಳನ್ನು ಆರಂಭಿಸುವ ಕೆಲಸಮಾಡಿದ. ದಿ ಐರಿಷ್ ಹೋಮ್‍ಸ್ಟಡ್ ಕೃಷಿ ಸಹಕಾರ ಚಳವಳಿಯ ಮುಖವಾಣಿಯಾಗಿದ್ದ ಪತ್ರಿಕೆಯ ಸಂಪಾದಕನಾಗಿ (1904-23 ) ದಿ ಐರಿಷ್ ಸ್ಟೇಟ್ಸ್‍ಮನ್ ಎಂಬ ಪತ್ರಿಕೆಯ ಸಂಪಾದಕನಾಗಿ (1923) ಕೆಲಸ ಮಾಡಿದ.

 	ಇವನು ಡಬ್ಲಿನ್‍ನಲ್ಲಿದ್ದಾಗ ಡಬ್ಲ್ಯು.ಬಿ.ಯೇಟ್ಸ್ ಕವಿಯ ಜೊತೆಗಿನ ಇವನ ಸಂವಾದ ಈತ ಕವಿಯಾಗಿ ಬೆಳೆಯಲು ಸಹಾಯಕವಾಯಿತು. ಐರಿಷ್ ಸ್ಟೇಟ್ಸ್ ಮನ್‍ನ ಸಂಪಾದಕನಾಗಿದ್ದಾಗ ಥಿಯೋಸಫಿ ಐರ್ಲೆಮಡಿನ ಆರ್ಥಿಕಸ್ಥಿತಿ ಮತ್ತು ಗೀತ ನಾಟಕ-ಇಂತಹ ವಿಷಯಗಳನ್ನು ಕುರಿತು ಹಲವಾರು ಲೆಖನಗಳನ್ನು ಬರೆದ ಅಸ್ಪಷ್ಟವಾದ ಮಬ್ಬಾದ ಪ್ರತೀಕಗಳೆಂದರೆ ಈತನಿಗೆ ಬಹಳ ಇಷ್ಟ. ಇವನ ವರ್ಣಚಿತ್ರ ಹಾಗೂ ಕಾವ್ಯದಲ್ಲಿ ಈ ಗುಣವನ್ನು ಕಾಣುತ್ತೇವೆ. ಇವನಿಗೆ ಪ್ರಿಯವಾದ ಕಾವ್ಯವಸ್ತುವೆಂದರೆ ಸೌಂದರ್ಯ, ಕನಸು, ಮತ್ತು ಸಾವು, ಹಾಗಾಗಿ ಇವನ ಕಾವ್ಯವನ್ನು ಆನುಭಾವಿಕ ಎಂದು ವಿಮರ್ಶಕರು ಪರಿಗಣಿಸಿದ್ದಾರೆ.
   	ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಕನ್ನಡದ ಪ್ರಸಿದ್ಧ ಕವಿ ದ.ರಾ.ಬೇಂದ್ರೆ ಯವರ ಕಾವ್ಯ ಮತ್ತು ಕಾವ್ಯವನ್ನು ಕುರಿತ ಅವರ ಆಲೋಚನೆಗಳ ಮೇಲೆ ಪ್ರಭಾವ ಬಿರಿದ ಮುಖ್ಯ ಪಾಶ್ವಾತ್ಯ ಕವಿಗಳಲ್ಲಿ ಈತನೂ ಒಬ್ಬ. ಸಮಾನ ಕವಿ ಗುಣಧರ್ಮಗಳನ್ನುಳ್ಳ ಇವನ ಕಾವ್ಯದ ಬಗೆಗೆ ಬೇಂದ್ರೆಯವರು ಆಕರ್ಷಿತವಾದದ್ದು. ಸಹಜವಾಗಿಯೇ ಇದೆ. ಆಧುನಿಕ ಕನ್ನಡದ ಅನುಭಾವಿ ಕವಿ ಎಂದು ಕರೆಯಬಹುದಾದ ಬೇಂದ್ರೆಯವರು ರಸಲನ ಆನುಭಾವಿಕ ಕಾವ್ಯವನ್ನು ಮೆಚ್ಚಿಕೊಂಡದ್ದು ಮತ್ತು ಇವನ ಕಾವ್ಯದೊಂದಿಗೆ ತಮ್ಮ ಕಾವ್ಯದ ಮೂಲಕ ಸಂವಾದ ನಡೆಸಿದ್ದು ವಿಶಿಷ್ಟವಾದದ್ದಾಗಿದೆ.
   	ರಸಲನ ಸಮಗ್ರಕಾವ್ಯ 1913ರಲ್ಲಿ ಪ್ರಕಟವಾಗಿ 1926ರಲ್ಲಿ ಪುನರ್ ಮುದ್ರಣಗೊಂಡಿತು. ಇಮ್ಯಾಜಿನೇಷನ್ಸ್ ಅಂಡ್ ರೆವರೀಸ್ (1915) ದಿ ಇಂಟರ್ ಪ್ರಿಟರ್ಸ್ (1922) ಮತ್ತು ಸಾಂಗ್ ಅಂಡ್ ಇಟ್ಸ್ ಫೌಂಟನ್ಸ್ (1932) ಇವು ಇವನ ಗದ್ಯಕೃತಿಗಳು. ಡಿಯೆರಡ್ರಾ (1907) ಎಂಬುದು ನಾಟಕ. ಇದು ಐರ್ಲೆಂಡಿನ ಸಾಹಿತ್ಯಕ ಪುನರುಜ್ಜೀವನದ ಗುಣಗಳನ್ನೆಲ್ಲ ಒಳಗೊಂಡದ್ದಾಗಿದೆ. ಲಿಟರರಿ ಐಡಿಯಲ್ಸ್ ಇನ್ ಐರ್ಲೆಂಡ್ (1899) ಎಂಬುದು ಪ್ರಬಂಧ ಸಂಕಲನ ಇದನ್ನು ಡಬ್ಲ್ಯು. ಬಿ. ಯೇಟ್ಸ್. ಡಬ್ಲ್ಯು. ಲಾರ್‍ಮಿನಿ ಮತ್ತು ಜಾನ್ ಎಗ್ಲಿನ್‍ಟನ್ ಅವರ ಸಹಯೊಗದೊಂದಿಗೆ ರಚಿಸಲಾಗಿದೆ. ದಿ ಕ್ಯಾಂಡ್ಲ್ ಆಫ್ ವಿಷ್‍ನ್ (1918) ಎಂಬ ಕೃತಿಯಲ್ಲಿ ಆನುಭಾವಿಕ ಕಲ್ಪನೆಯಲ್ಲಿ ಸತ್ಯಾನ್ವೇಷನೆಯನ್ನು ಕುರಿತು ವಿವೇಚಿಸಲಾಗಿದೆ.
   	ಹೋಂವರ್ಡ್ : ಸಾಂಗ್ಸ್ ಬೈ ದಿ ವೆ (1894) ದಿ ಅರ್ತ್ ಬ್ರೆತ್ (1897) ಇವು ಇವನ ಇತರ ಕೃತಿಗಳು.
   	ಡಬ್ಲಿನ್ ವಿಶ್ವವಿದ್ಯಾಲಯ ಇವನಿಗೆ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿದ (1920) ಈತ 1935 ಜುಲೈ 17ರಂದು ಬೌರ್ನಮೌತ್ ಎಂಬಲ್ಲಿ ನಿಧನನಾದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ